ಸೆ.27ರಿಂದ ಕಿವುಡರ ರಾಜ್ಯಮಟ್ಟದ ಕ್ರೀಡಾಕೂಟ
ಬಾಗಲಕೋಟೆ: ನಗರದ ಬಸವೇಶ್ವರ ಮೈದಾನದಲ್ಲಿ ಸೆ.27ರಿಂದ 29ರವರೆಗೆ ಕಿವುಡರ ರಾಜ್ಯಮಟ್ಟದ 14ನೇ ಕ್ರೀಡಾಕೂಟ ನಡೆಯಲಿದೆ ಎಂದು ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷರು ಸುನಿಲ ಕಂದಕೂರ ತಿಳಿಸಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಸಂಜ್ಞೆಭಾಷೆ ಮೂಲಕ ಈ ವಿಷಯ ತಿಳಿಸಿದರು. ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಸಲಹೆಗಾರರು ರಮೇಶ ಪಡಸಲಗಿ ಕ್ರೀಡಾಕೂಟದ ಮಾಹಿತಿ ನೀಡಿದರು, ಸೆ.27ರಂದು ಬೆಳಗ್ಗೆ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ನಡೆಯಲಿದೆ. ಮಾಜಿ ಶಾಸಕರು ಡಾ.ವೀರಣ್ಣ ಚರಂತಿಮಠ ಕ್ರೀಡಾಕೂಟ ಉದ್ಘಾಟಿಸುವರು. ಸಂಸದರು ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳು ಕೆ.ಎಂ.ಜಾನಕಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಲತಾ ಹೆರಂಜಲ್, ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಸ್.ಪಾಟೀಲ, ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟ ಸಂಘದ ಅಧ್ಯಕ್ಷ ವಿ.ಕುಮಾರ್, ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಕಾರ್ಯದರ್ಶಿ ಜಿ.ಎಸ್.ನವೀನಕುಮಾರ್, ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಸುನಿಲ ಕಂದಕೂರ, ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಜಾಧವ ಭಾಗವಹಿಸಲಿದ್ದಾರೆ.
ಸೆ.29ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಅಬಕಾರಿ ಸಚಿವರು ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರು ಎಚ್.ವೈ.ಮೇಟಿ, ಅತಿಥಿಗಳಾಗಿ ಎಸ್ಪಿ ಅಮರನಾಥ ರೆಡ್ಡಿ, ಅಂಗವಿಕಲ ಇಲಾಖೆ ಅಧಿಕಾರಿ ಮಹಾಂತೇಶ ಕೋರಿ, ಉದ್ಯಮಿ ವಿಶ್ವನಾಥ ಗುಳೇದ, ಕಿರಣ ಮೆಳ್ಳಿಗೇರಿ, ಬೆಂಗಳೂರಿನ ಭಾರತ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಉಪ ಜನರಲ್ ಮ್ಯಾನೇಜರ್ ಹನುಮಂತ ಮಾಚಪ್ಪನವರ ಭಾಗವಹಿಸಲಿದ್ದಾರೆ.
ರಾಜ್ಯದ 20 ಜಿಲ್ಲೆಗಳ ಕಿವುಡರ ಸಂಘದ 500ಕ್ಕೂ ಹೆಚ್ಚು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಮಕ್ಕಳಿಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದಿಂದ ಪ್ರತ್ಯೇಕ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ದಿನಗಳ ಕಾಲ ನಗರದ ಬಸವೇಶ್ವರ ಮೈದಾನದಲ್ಲಿ ಅಥ್ಲೆಟಿಕ್ಸ್ ನಡೆಯಲಿದೆ. ಟೇಬಲ್ ಟೆನ್ನಿಸ್, ಸೆಟಲ್ ಬ್ಯಾಡ್ಮಿಂಟನ್ ಹಾಗೂ ಎತ್ತರ ಜಿಗಿತ ಕ್ರೀಡೆಗಳ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ನಡೆಯಲಿವೆ.
ರಾಘವೇಂದ್ರ ಜಾಧವ, ಅಭಯ ಕುಲಕರ್ಣಿ,ಪ್ರಕಾಶ ಗೌಡರ,ಅನಿತಾ ಗೌಡರ, ಸಂತೋಷ ಗಣಿ,ಅಜೆಯ ಕುಮಾರ ನಂದಾಗವಿ, ರಮೇಶ ಪಡಸಲಗಿ,ಸ್ವರೂಪ ಮತ್ತು ಇತರರು ಉಪಸ್ಥಿತರಿದ್ದರು
ನೆರವು ನೀಡಿ
ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದಿಂದ ನಗರದಲ್ಲಿ 4ನೇ ಬಾರಿ ರಾಜ್ಯಮಟ್ಟದ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 2012ರಲ್ಲಿ ಅಥ್ಲೆಟಿಕ್ಸ್, 2014ರಲ್ಲಿ ಚದುರಂಗ, 2017ರಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಹಮ್ಮಿಕೊಳ್ಳಲಾಗಿತ್ತು. ಸದ್ಯ ಮತ್ತೆ ರಾಜ್ಯಮಟ್ಟದ ಅಥ್ಲೆಟಿಕ್ಸ್ ಹಮ್ಮಿಕೊಳ್ಳಲಾಗುತ್ತಿದೆ. ಈ ಕ್ರೀಡಾಕೂಟಕ್ಕೆ ಸರಕಾರದಿಂದ ನಿರೀಕ್ಷಿತ ಧನ ಸಹಾಯ ಲಭಿಸುತ್ತಿಲ್ಲ. ಕೆಲವು ದಾನಿಗಳು ನಮ್ಮ ಕ್ರೀಡಾಕೂಟಕ್ಕೆ ಕೈಜೋಡಿಸಿದ್ದಾರೆ. 500ಕ್ಕೂ ಹೆಚ್ಚು ಕಿವುಡ ಮಕ್ಕಳಿಗೆ ಊಟ, ವಸತಿ ಕಲ್ಪಿಸುವುದು ಸವಾಲಿನ ಕೆಲಸವಾಗಿದ್ದು, ದಾನಿಗಳು ಸಂಘಕ್ಕೆ ನೆರವು ನೀಡಬೇಕು ಎಂದು ಸುನಿಲ ಕಂದಕೂರ ಸಂಜ್ಞೆ ಬಾಷೆಯ ಮೂಲಕ ಕೋರಿದರು